ರಾಮಚಂದ್ರರಾವ್, ಸಾಲಿ
1888-1978. ಸ್ವಾತಂತ್ರ್ಯ ಹೋರಾಟಗಾರ. ಶಿಕ್ಷಕ ಮತ್ತು ಸಾಹಿತಿ. ಹುಟ್ಟಿದ್ದು ರಾಮದುರ್ಗದಲ್ಲಿ. ಇವರ ಮನೆತನದ ಹಿರಿಯರೆಲ್ಲ ಶಿರಸಂಗಿ ದೇಸಾಯಿಯವರಿಗೆ ವಿದ್ಯಾ ಗುರುಗಳಾಗಿದ್ದುದರಿಂದ ಇವರ ಮನೆತನಕ್ಕೆ ಸಾಲಿ ಮನೆತನ ಎಂದೇ ಹೆಸರಾಯಿತು. ರಾಮಚಂದ್ರರಾಯರು ಬೆಳೆದುದು ಬಡತನದಲ್ಲಿ. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಇವರು ಸ್ವಂತ ಪರಿಶ್ರಮದಿಂದ ಬೆಳಗಾಂವಿ, ಬಿಜಾಪುರಗಳಲ್ಲಿ ವ್ಯಾಸಂಗಮಾಡಿ ಆಗಿನ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ, ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಭಾವಿತರಾದ ಇವರು. ಬಾಲಗಂಗಾಧರ ತಿಲಕರ ಬಂಧನವಾದಾಗ ಅಂಚೆ ಕಛೇರಿಯ ಕೆಲಸಕ್ಕೆ ಇವರು ರಾಜೀನಾಮೆ ನೀಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಪುಣೆ ಮತ್ತು ಮುಂಬಯಿಗಳಲ್ಲಿ ತಮ್ಮ ಬದುಕಿನ ಹಲವು ವರ್ಷಗಳನ್ನು ಕಳೆದ ಇವರು 1923ರಲ್ಲಿ ಧಾರವಾಡಕ್ಕೆ ಬಂದು ನೆಲೆಸಿದರು. ಅದೇ ತಾನೇ ಅಲ್ಲಿ ಆರಂಭವಾದ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾದ ಇವರು ಆ ಸಂಸ್ಥೆಯ ಬೆಳೆವಣಿಗೆಗಾಗಿ ಶ್ರಮಿಸಿ, 1946ರಲ್ಲಿ ಆ ಸಂಸ್ಥೆಯ ಕೆಲಸದಿಂದ ನಿವೃತ್ತರಾದರು.

ಸಂಸ್ಕøತ, ಕನ್ನಡ, ಇಂಗ್ಲಿಷ್ ಭಾಷೆಗಳ ಜೊತೆಗೆ ಪಾಲಿ, ಮರಾಠಿ, ಹಿಂದೀ ಮತ್ತು ಗುಜರಾತಿ ಭಾಷೆಗಳಲ್ಲೂ ಪರಿಶ್ರಮವನ್ನು ಸಂಪಾದಿಸಿಕೊಂಡಿದ್ದ ರಾಮಚಂದ್ರರಾಯರು ಆಲೂರು ವೆಂಕಟರಾವ್, ಮುದವೀಡು ಕೃಷ್ಣರಾವ್, ರೊದ್ದ ಶ್ರೀನಿವಾಸರಾವ್ ಮುಂತಾದ ಹೆಸರಾಂತ ಕನ್ನಡ ಕಾರ್ಯಕರ್ತರ ಸ್ನೇಹ ಸಹವಾಸಗಳಿಂದ ಸ್ಪೂರ್ತಿಗೊಂಡು ಮಾಡಿರುವ ಸಾಹಿತ್ಯಸೇವೆ ಗಮನಾರ್ಹವಾದುದು. ಕಥೆ, ಕವನ, ನಾಟಕ - ಈ ಪ್ರಕಾರದಲ್ಲಿ ಇವರು 16 ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಪ್ರದಾಯ ಕಾವ್ಯಮಾರ್ಗದಲ್ಲಿ ನಡೆದ ಇವರು ಪ್ರಕಟಿಸಿದ ಮೊದಲ ಕವನ `ಬಂಬಲು` ಒಂದು ದೇಶ ಭಕ್ತಿ ಗೀತೆ. ಚಿಗುರೆಲೆ, ಚಿತ್ರಸೃಷ್ಟಿ, ಇವರು ಪ್ರಕಟಿಸಿರುವ ಎರಡು ಸಂಗ್ರಹಗಳು. ಈ ಸಂಕಲನಗಳಲ್ಲಿರುವ ಕೊಡಗು, ಬೇಸಗೆ, ಬಿರುಗಾಳಿ, ಕಾರ್ಮೋಡ, ಇಂಚರ ಮುಂತಾದ ಕವನಗಳಲ್ಲಿ ಇವರ ಪ್ರಕೃತಿಪ್ರೇಮವನ್ನೂ ದೇಶಭಕ್ತಿಯನ್ನೂ ಕಾಣಬಹುದು. ಅಭಿಸಾರಿಕೆ ಎಂಬುದು ಇವರು ರಚಿಸಿರುವ ಒಂದು ನೀಳ್ಗವನ, ಬೌದ್ಧ ಗುರು ಉಪಗುಪ್ತನನ್ನು ಕುರಿತ ಕಥೆಯೊಂದನ್ನು ಆಧರಿಸಿಕೊಂಡು, ರವೀಂದ್ರರ ಇದೇ ಹೆಸರಿನ ಕವನದಿಂದ ಸ್ಫೂರ್ತಿಹೊಂದಿ ಬರೆದದ್ದು. ಇವರ ಇನ್ನೊಂದು ನೀಳ್ಗವನ `ತಿಲಾಂಜಲಿ` ಒಂದು ಶೋಕಗೀತೆ. ಆಕಸ್ಮಿಕವಾಗಿ ಅಗಲಿದ ಪುತ್ರನನ್ನು ನೆನೆದು ಬರೆದದ್ದು ಯದುಪತಿ (1961) ಇವರ ಒಂದು ಕಾದಂಬರಿ, ರಾಮಚಂದ್ರರಾಯರ ಸರಳ, ನೇರ ಗದ್ಯಶೈಲಿಗೆ ಸಾಕ್ಷಿಯಾಗಿದೆ. ಜಯಗುರುದೇವ ಎಂಬುದು ಇವರ ಇನ್ನೊಂದು ಕಾದಂಬರಿ, ಮಕ್ಕಳಿಗಾಗಿ ಸಿಪಾಯಪ್ಪ, ಐದು ಜನ ಪ್ರಾಣಿಗಳು ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಕನ್ಯ ಎಂಬುದು ಇವರು ಬರೆದಿರುವ ಒಂದು ನಾಟಕ ಪಾಲಿ ಭಾಷೆಯಿಂದ ಬುದ್ಧನ ಕೆಲವು ಉಪದೇಶ ಕಥೆಗಳನ್ನು ಕನ್ನಡಿಸಿ ಬುದ್ಧ ಜಾತಕಗಳು (1948) ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ವಿನೋಬಾರವರ ಸ್ಥಿತಪ್ರಜ್ಞದರ್ಶನವನ್ನು ಮತ್ತು ಕಾಕಾ ಕಾಲೇಲಕರರ ಜೀವನಲೀಲೆಯನ್ನು ಕನ್ನಡಕ್ಕೆ ತಂದಿದ್ದಾರೆ. ಸುದಾಮಚರಿತ್ರಂ, ಗದ್ಯ ರಾಮಾಯಣಂ - ಇವು ಸಂಸ್ಕøತದಲ್ಲಿ ಇವರು ಬರೆದಿರುವ ಕೆಲವು ಕೃತಿಗಳು.

ಸಾಲಿ ರಾಮಚಂದ್ರರಾಯರ ಸಾಹಿತ್ಯಸೇವೆಯನ್ನು ಗುರುತಿಸಿ ಇವರ ಎಂಬತ್ತು ಮತ್ತು ತೊಂಬತ್ತನೆಯ ಹುಟ್ಟುಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲಾಯಿತು. ರಾಜ್ಯ ಸಾಹಿತ್ಯ ಅಕೆಡೆಮಿ 1968ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಇವರು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ (1978) ಧಾರವಾಡದಲ್ಲಿ ನಿಧನಹೊಂದಿದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ